ಬೆಂಗಳೂರು : ಕನ್ನಡದ ಹಿರಿಯ ಸಾಹಿತಿ, ಲೇಖಕಿ ಡಾ.ಕಮಲಾ ಹಂಪನಾ (89) ಅವರು ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ. ಪುತ್ರಿ ಡಾ. ಆರತಿ ಮನೆಯಲ್ಲಿ ವಾಸವಿದ್ದ ಕಮಲಾ ಅವರು ರಾತ್ರಿ 10 ಗಂಟೆ ವೇಳೆಗೆ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ರಾಜಾಜಿನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುತ್ತದೆ ಎಂದು ಅವರ ಪತಿ ಸಾಹಿತಿ ಹಂಪ ನಾಗರಾಜಯ್ಯ ತಿಳಿಸಿದ್ದಾರೆ.
ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವ ಪ್ರೊ. ಡಾ. ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ.
ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರಿಗೆ ಕರ್ನಾಟಕ ಸರ್ಕಾರ "ದಾನಚಿಂತಾಮಣಿ ಅತ್ತಿಮಬ್ಬೆ" ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು "ಕೊಡಮಾಡುವ ನಾಡೋಜ" ಪ್ರಶಸ್ತಿ ನೀಡಿ ಗೌರವಿಸಿದೆ.
ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ಇವರು ಪ್ರಕಟಿಸಿದ್ದು, ಬಿಂದಲಿ, ಬುಗುಡಿ ಹಾಗೂ ಬಯಲು ಇವು ಕಮಲಾ ಹಂಪನಾ ಅವರ ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ಬರೆದಿದ್ದಾರೆ.
ಕಮಲ ಹಂಪನ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
Post a comment
Log in to write reviews