ಕರ್ನಾಟಕ
ಗಣೇಶ ಮೂರ್ತಿ ಮೆರವಣಿಗೆಯ ಡಿಜೆ ಹಣವನ್ನ ರಸ್ತೆ ದುರಸ್ತಿಗೆ ಬಳಸಲು ಮುಂದಾದ ಊರಿನ ಗ್ರಾಮಸ್ಥರು
ಕೊಪ್ಪಳ: ಗಣೇಶನ ಭಕ್ತರು ಗಣೇಶನ ಪ್ರತಿಷ್ಠಾಪನೆಯ ಸಮಯದಲ್ಲಿ ಮತ್ತು ವಿಸರ್ಜನೆ ವೇಳೆ ಅನೇಕ ಕಡೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿದ್ದಾರೆ. ಅದೇ ರೀತಿ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕೂಡ ಹಿಂದೂ ಮಹಾಗಣಪತಿ ಕಾಮನಕಟ್ಟೆ ಗೆಳೆಯರ ಬಳಗದಿಂದ ಗಣೇಶ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಈ ತಂಡ ಗ್ರಾಮದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುತ್ತಾ ಬಂದಿದೆ. ಡಿಜೆ ಹಚ್ಚಿದರೆ ಅದರ ಆನಂದ ಇರುವುದು ಕೇವಲ ನಾಲ್ಕೈದು ಗಂಟೆ ಮಾತ್ರ. ಆದ್ರೆ, ಇದನ್ನು ಹೊರತುಪಡಿಸಿ ಏನಾದರೂ ಸಮಾಜಮುಖಿ ಕೆಲಸ ಮಾಡೋಣ ಎಂದು ಗೆಳೆಯರ ಬಳಗದ ಸದಸ್ಯರು ನಿರ್ಧರಿಸಿದರು. ಅದರಂತೆ ಕಿನ್ನಾಳ ಗ್ರಾಮದಿಂದ ಕೊಪ್ಪಳ ನಗರಕ್ಕೆ ಹೋಗುವ ರಸ್ತೆ ದುರಸ್ಥಿ ಮಾಡಲು ಮುಂದಾಗಿದ್ದು, ಇಂದು (ಸೆ. 10) ಮುಂಜಾನೆಯಿಂದ ರಸ್ತೆ ದುರಸ್ಥಿ ಕೆಲಸವನ್ನು ಆರಂಭಿಸಿದ್ದಾರೆ. ಕಿನ್ನಾಳ ಗ್ರಾಮದಿಂದ ಕೊಪ್ಪಳ ನಗರಕ್ಕೆ ಬರಲು ಪ್ರಯಾಣಿಕರು ಹರಸಾಹಸ ಪಡಬೇಕಾಗಿತ್ತು. ರಸ್ತೆಯಲ್ಲಿ ಬಹುತೇಕ ತಗ್ಗುಗುಂಡಿಗಳೇ ಇವೆ. ಹೀಗಾಗಿ ಹತ್ತು ಕಿಲೋ ಮೀಟರ್ ಪ್ರಯಾಣಕ್ಕೆ ಒಂದು ಗಂಟೆ ಸಮಯಾವಕಾಶ ಬೇಕಾಗಿತ್ತು. ತಮ್ಮೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಳೆದ ಅನೇಕ ವರ್ಷಗಳಿಂದ ನಿರ್ಮಿಸಿಲ್ಲ. ಇರುವ ರಸ್ತೆ ಕೂಡ ಹಾಳಾಗಿ ಹೋಗಿದ್ದರಿಂದ ಗ್ರಾಮದ ಜನರು ಹೊಸದಾಗಿ ರಸ್ತೆ ನಿರ್ಮಾಣ ಮಾಡಿ, ಇಲ್ಲವೇ ರಸ್ತೆಯನ್ನು ರಿಪೇರಿಯಾದರೂ ಮಾಡಿ ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೂ ಯಾರೂ ಕೂಡ ಜನರ ಸಮಸ್ಯೆಗೆ ಸ್ಪಂಧಿಸುವ ಕೆಲಸ ಮಾಡಿರಲಿಲ್ಲ. ಹೀಗಾಗಿ ಡಿಜೆ ಗಾಗಿ ಬಳಸಲು ಉದ್ದೇಶಿಸಲಾಗಿದ್ದ ಎರಡು ಲಕ್ಷಕ್ಕೂ ಅಧಿಕ ಹಣವನ್ನು, ಡಿಜೆ ಬದಲಾಗಿ ರಸ್ತೆ ರಿಪೇರಿ ಮಾಡಲು ನಿರ್ಧಿರಿಸಿದ್ದಾರೆ. ಅದರಂತೆ ಕಿನ್ನಾಳ ಗ್ರಾಮದಿಂದ ಸರಿಸುಮಾರು ಎಂಟರಿಂದ ಒಂಬತ್ತು ಕಿಲೋ ಮೀಟರವರಗೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವುದರ ಜೊತೆಗೆ ಮುರುಮ್ ಹಾಕಿ, ಸಮತಟ್ಟು ಮಾಡುವ ಕೆಲಸವನ್ನು ಗ್ರಾಮಸ್ಥರು ಆರಂಭಿಸಿದ್ದಾರೆ. ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಕೆಲಸವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಬೇಕು. ಆದ್ರೆ, ಅವರು ತಾವು ಮಾಡುವ ಕೆಲಸವನ್ನು ಮರೆತಿದ್ದರಿಂದ, ಜನರು ಅನಿವಾರ್ಯವಾಗಿ ಇದೀಗ ತಾವೇ ರಸ್ತೆ ದುರಸ್ಥಿ ಮಾಡಲು ಆರಂಭಿಸಿದ್ದಾರೆ. ಜೊತೆಗೆ ಡಿಜೆ ಗಾಗಿ ಬಳಸಲು ಮುಂದಾಗಿದ್ದ ಹಣವನ್ನು ತಮ್ಮೂರ ರಸ್ತೆ ರಿಪೇರಿಗೆ ಬಳಸಲು ಮುಂದಾಗಿರೋದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
Post a comment
Log in to write reviews