ಜಗತ್ತು
ವಾಕಿ ಟಾಕಿಗಳು ಸ್ಫೋಟ: 20 ಸಾವು, 450 ಮಂದಿಗೆ ಗಾಯ
ಲೆಬನಾನ್: ಎಲೆಕ್ಟ್ರಾನಿಕ್ಸ್ ವಾಕಿಟಾಕಿ ಮತ್ತು ಸೋಲಾರ್ ಸಲಕರಣೆಗಳು ಲೆಬನಾನ್‌ನಲ್ಲಿ ಹಲವೆಡೆ ಸ್ಫೋಟಗೊಂಡಿದ್ದು, ಕನಿಷ್ಠ 20 ಜನರು ಮೃತಪಟ್ಟು, 450 ಮಂದಿ ಗಾಯಗೊಂಡಿದ್ದಾರೆ. ಆರೋಗ್ಯ ಸಚಿವರು ಈ ಕುರಿತು ಲೆಬೆನಾನ್ ಮಾಹಿತಿ ನೀಡಿದ್ದಾರೆ. ಹಿಜ್ಬುಲ್ಲಾ ಬಳಸುತ್ತಿದ್ದ ವಾಕಿಟಾಕಿಗಳು ಸ್ಫೋಟಗೊಂಡಿವೆ ಎಂದು ವರದಿಯಾಗಿದೆ.
ಲೆಬನಾನ್‌ನಲ್ಲಿ ಪೇಜರ್ಗಳು ಸ್ಫೋಟಗೊಂಡು 12 ಜನ ಸಾವನ್ನಪ್ಪಿ, 280ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರವಷ್ಟೇ ವರದಿಯಾಗಿತ್ತು. ಈ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್ ಸಂವಹನ ಸಾಧನಗಳು ದೇಶಾದ್ಯಂತ ಬ್ಲಾಸ್ಟ್ ಆಗಿದ್ದು, ಅಪಾರ ಸಾವು-ನೋವು ಸಂಭವಿಸಿದೆ. ಇಸ್ರೇಲ್ ಹಿಜ್ಬುಲ್ಲಾವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಈ ದೇಶಗಳಲ್ಲಿ ಉಂಟಾಗಿದೆ.
ಈ ಮಧ್ಯೆ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಸಾಮಾಜಿಕ ಜಾಲಾತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ, 'ಇದು ಯುದ್ಧದ ಹೊಸ ಹಂತ. ನಾವು ದೇಶದ ಉತ್ತರದ ಪ್ರದೇಶಗಳತ್ತ ಗಮನ ಕೇಂದ್ರೀಕರಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.
ಇಸ್ರೇಲ್ ರಕ್ಷಣಾ ಸಚಿವರು 'ನಾವು ಯುದ್ಧದ ಹೊಸ ಹಂತವನ್ನು ಆರಂಭಿಸಿದ್ದೇವೆ. ದೇಶದ ಉತ್ತರ ಭಾಗಗಳಿಗೆ ಸೇನೆ ಹಾಗೂ ಸಂಪನ್ಮೂಲಗಳನ್ನು ಕಳುಹಿಸುತ್ತಿದ್ದೇವೆ. ಇಸ್ರೇಲ್ನ ಉತ್ತರ ಭಾಗದ ಜನರು ಸುರಕ್ಷಿತವಾಗಿ ಮನೆಗೆ ಮರಳಲು ಎಲ್ಲ ಕ್ರಮ ಕೈಗೊಳ್ಳಲು ಭದ್ರತಾ ವ್ಯವಸ್ಥೆ ಬಲಿಷ್ಠಗೊಳಿಸಿದ್ದೇವೆ' ಎಂದು ಪೋಸ್ಟ್ ಮಾಡಿದ್ದಾರೆ.
ಬುಧವಾರ, ಲೆಬನಾನ್‌ನಲ್ಲಿ ವಾಕಿ-ಟಾಕಿ ಸ್ಫೋಟಗಳ ನಂತರ ಗಾಯಗೊಂಡವರನ್ನು ರಕ್ಷಿಸಲು ಮತ್ತು ಸ್ಥಳಾಂತರಿಸಲು ಲೆಬನಾನಿನ ರೆಡ್‌ಕ್ರಾಸ್‌ನ ಡಜನ್‌ಗಟ್ಟಲೆ ಆಂಬ್ಯುಲೆನ್ಸ್ ಸಿಬ್ಬಂದಿ ಶ್ರಮಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ದಕ್ಷಿಣ ಲೆಬನಾನ್, ಬೈರುತ್‌ನ ದಕ್ಷಿಣ ಉಪನಗರಗಳು ಮತ್ತು ಮಧ್ಯ ಬೆಕಾ ಕಣಿವೆಯಲ್ಲಿ 30ಕ್ಕೂ ಹೆಚ್ಚು ಲೆಬನಾನಿನ ರೆಡ್‌ಕ್ರಾಸ್ ತುರ್ತು ವೈದ್ಯಕೀಯ ತಂಡಗಳು ಕೆಲಸ ಮಾಡುತ್ತಿವೆ. ಹೆಚ್ಚುವರಿಯಾಗಿ, 50ಕ್ಕೂ ಆಂಬ್ಯುಲೆನ್ಸ್ಗಳನ್ನು ಮೌಂಟ್ ಲೆಬನಾನ್ ಮತ್ತು ಬೈರುತ್‌ನಲ್ಲಿ ಜನರನ್ನು ಸ್ಥಳಾಂತರಿಸಲು ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ.
60 ಮನೆಗಳು ಮತ್ತು ಅಂಗಡಿಗಳಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿರುವುದಕ್ಕೆ ವಾಕಿ-ಟಾಕಿಗಳು ಸ್ಫೋಟಗೊಂಡ ಪರಿಣಾಮದಿಂದ ಒಂದು ಲಿಥಿಯಂ ಬ್ಯಾಟರಿ ಅಂಗಡಿ ಹೊತ್ತು ಉರಿದಿದೆ. ಸುಮಾರು 15 ಕಾರುಗಳು ಮತ್ತು ಡಜನ್‌ಗಟ್ಟಲೆ ಮೋಟರ್ ಸೈಕಲ್‌ಗಳು ಮತ್ತು ಎರಡು ಫಿಂಗರ್‌ಪ್ರಿಂಟ್ ಸಾಧನಗಳು ಬೆಂಕಿಗೆ ಆಹುತಿಯಾಗಿ ಸುಟ್ಟು ಹೋಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಸ್ರೇಲ್-ಹಿಜ್ಬುಲ್ಲಾ ಮಧ್ಯೆ ಅಕ್ಟೋಬರ್ 7ರ ಬಳಿಕ ಗುಂಡಿನ ಚಕಮಕಿ ನಡೆಯುತ್ತಿದ್ದು, ಇದರಿಂದ ಹಲವು ಸಂದರ್ಭಗಳಲ್ಲಿ ಈ ದೇಶಗಳಲ್ಲಿ ಯುದ್ಧದ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಾಜಾ ಆರೋಗ್ಯ ಸಚಿವರು ಈವರೆಗೆ 41 ಸಾವಿರ ಪ್ಯಾಲೆಸ್ತೇನಿಯರು ಹತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು, ಇಸ್ರೇಲ್ ಈವರೆಗೆ 17 ಸಾವಿರ ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ.
Post a comment
Log in to write reviews