ದಾವಣಗೆರೆ: ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ನಿರಂತರ ವರುಣನ ಆರ್ಭಟ ಜೋರಾಗಿದ್ದು, ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಬುಧವಾರ ತಡರಾತ್ರಿಯಿಂದಲೂ ಧಾರಾಕಾರ ಮಳೆ ಸುರಿದಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.
ಸುರಿದ ಭಾರಿ ಮಳೆಯಿಂದಾಗಿ ಪಿಸಾಳೆ ಬಡಾವಣೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಗಳು ಜಲಾವೃತಗೊಂಡು ರಾತ್ರಿಯಿಡೀ ನೀರನ್ನು ಹೊರಹಾಕುವುದರಲ್ಲೇ ತೊಡಗಿದ್ದ ಜನರು ನಿದ್ದೆ ಮಾಡಲಾಗದ ಪರಿಸ್ಥಿತಿ ಬಂದಿದೆ. ಮನೆ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಚರಂಡಿಗಳು ತುಂಬಿ ಹರಿದು ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ಈರುಳ್ಳಿ ಮಾರುಕಟ್ಟೆ, ಭಾರತ್ ಕಾಲೋನಿ ಸೇರಿ ಹಲವೆಡೆ ಜನರಿಗೆ ತೊಂದರೆ ಉಂಟಾಗಿದೆ. ಇದಲ್ಲದೆ, ನಗರದ ಬೇತೂರು ರಸ್ತೆ, ಹಳೇ ದಾವಣಗೆರೆ ಭಾಗದ ವಿವಿಧ ಬಡಾವಣೆಗಳಲ್ಲಿ ಚರಂಡಿ ನೀರು ಹರಿಯುವಿಕೆಗೆ ಅಡಚಣೆಯಾಗಿ, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ, ನೀರು ತೆರವುಗೊಳಿಸಿದ್ದಾರೆ.
ಜಿಲ್ಲೆಯ ಜಗಳೂರು ತಾಲೂಕಿನ ಜಿನಗಿ ಹಳ್ಳ ತುಂಬಿ ಹರಿಯುತ್ತಿದೆ. ಕೆರೆ ಕೋಡಿ ಹರಿದು ಹಿರೇಮಲ್ಲನಹೊಳೆ ಗ್ರಾಮವು ಜಲಾವೃತವಾಗಿದ್ದು, ಜನರಿಗೆ ಸಾಕಷ್ಟು ಸಮಸ್ಯೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
Post a comment
Log in to write reviews