ಕರ್ನಾಟಕ
ಮುರ್ಡೇಶ್ವರದಲ್ಲಿ ಅಲೆಗಳ ಅಬ್ಬರ: ಒರ್ವ ಸಾವು, ನಾಲ್ವರ ರಕ್ಷಣೆ
ಭಟ್ಕಳ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಎತ್ತರದ ಅಲೆಗಳ ಅಬ್ಬರಕ್ಕೆ ದೋಣಿಯೊಂದು ಪಲ್ಟಿಯಾದ ಘಟನೆಯು ಮುರ್ಡೇಶ್ವರದಲ್ಲಿ ನಡೆದಿದ್ದು. ಓರ್ವ ವ್ಯಕ್ತಿ ಸಾವನ್ನಪ್ಪಿದ್ದನೆ, ಉಳಿದ ನಾಲ್ವರನ್ನು ದಡದಲ್ಲಿದ್ದ ಇತರ ಮೀನುಗಾರರ ಸಹಾಯದಿಂದ ರಕ್ಷಿಸಲಾಗಿದೆ.
ಮೃತರನ್ನು ಹೈದರಾಲಿ ಜಕರಿಯಾ ಬಾಬು (44) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ವ್ಯಕ್ತಿಗಳಾದ ಇಬ್ರಾಹಿಂ ಫಕೀರ ಮುಲ್ಲಾ (50) ಮತ್ತು ಅಬು ಮೊಹಮ್ಮದ್ ಉಮ್ರಾ (50) ಗಂಭೀರವಾಗಿ ಗಾಯಗೊಂಡು ಮುರ್ಡೇಶ್ವರ ಆರ್‌ಎನ್‌ಎಸ್ ಆಸ್ಪತ್ರೆಗೆ ದಾಖಲಾಗಿದ್ದರೆ, ಅಬ್ದುಲ್ ಸಮಿ ಇಲ್ಯಾಸ್ ಕಾಲು (21) ಮತ್ತು ಮುಹಮ್ಮದ್ ಶಾಫಿ ತಡ್ಲಿಕರ್ (45) ಪ್ರಾಣಾಪಾದಿಂದ ಪಾರಾಗಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಬ್ದುಲ್ ಸಮಿ, ನಾವು ಐವರು ದೋಣಿಯಲ್ಲಿದ್ದು ಸಮುದ್ರದಲ್ಲಿ ಬಲೆ ಹಾಕುತ್ತಿದ್ದೆವು, ದಡಕ್ಕೆ ಹಿಂತಿರುಗುವಾಗ ಹಠಾತ್ ಅಲೆಯೊಂದು ಅಪ್ಪಳಿ ದೋಣಿ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಅಲೆಯ ರಭಸಕ್ಕೆ ದೋಣಿಯಲ್ಲಿದ್ದ ಓರ್ವ ಮೀನುಗಾರ ಸಮುದ್ರಕ್ಕೆ ಎಸೆಯಲ್ಪಟ್ಟರು. ನೋಡ ನೋಡುತ್ತಿದ್ದಂತೆ ಮತ್ತೊಂದು ಅಲೆಯು ಅಪ್ಪಳಿಸಿ ದೋಣಿಯಲ್ಲಿದ್ದ ಮೂವರನ್ನು ಸಮುದ್ರದಲ್ಲಿ ಮುಳುಗಿಸಿತು. ಇತರ ಬೋಟಿನಲ್ಲಿದ್ದವರು ಮೂವರನ್ನು ರಕ್ಷಿಸಿದ್ದಾರೆ. ಆದರೆ ಹೈದರಲಿ ಝಕರಿಯಾ ಎಂಬುವವರು ಈ ದುರಂತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಮುರ್ಡೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೈದರ್ ಅಲಿ ಅವರ ಮೃತದೇಹವನ್ನು ಬೀಚ್ ರಸ್ತೆಯಲ್ಲಿರುವ ಅವರ ಮನೆಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
Post a comment
Log in to write reviews