ಆ ಮಾನಸಿಕ ಅಸ್ವಸ್ಥೆ 53 ಜನರ ವಿರುದ್ಧದ ದೂರುಗಳಲ್ಲಿ ಬಿಎಸ್ವೈ ಪ್ರಕರಣಕ್ಕೇ ಸರ್ಕಾರ ವಿಶೇಷ ಒತ್ತು ನೀಡಿದ್ದು ಏಕೆ? – ಬಿಜೆಪಿ ಪ್ರಶ್ನೆ
ಬೆಂಗಳೂರು : ಮಾನಸಿಕ ಅಸ್ವಸ್ಥೆ ಸ್ವತಃ ತನ್ನ ಮಕ್ಕಳು ಹಾಗೂ ಗಂಡನ ವಿರುದ್ಧವೇ ದೂರು ನೀಡಿರುವುದೂ ಸೇರಿದಂತೆ 53 ಜನರ ವಿರುದ್ಧದ ದೂರುಗಳಲ್ಲಿ ಯಡಿಯೂರಪ್ಪನವರ ಪ್ರಕರಣಕ್ಕೇ ಸರ್ಕಾರ ವಿಶೇಷ ಒತ್ತು ನೀಡಿದ್ದು ಏಕೆ? ಪ್ರಕರಣ ದಾಖಲಾಗಿ 3 ತಿಂಗಳಾದ ಮೇಲೆ ದಿಢೀರ್ ಬಂಧನ ಮಾಡುವ ಸಂಚು ರೂಪಿಸಿದ್ದು ಏಕೆ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಪ್ರಕರಣವೊಂದರಲ್ಲಿ ಫೋಕ್ಸೊ ಕಾಯ್ದೆಯಡಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಬಂಧಿಸಲು ಸಿದ್ದತೆ ನಡೆದಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ರಾಜ್ಯ ನಾಯಕರು ಬಿಜೆಪಿ ವಿರುದ್ಧ ಒಂದಿಲ್ಲೊಂದು ಷಡ್ಯಂತ್ರ ರೂಪಿಸುವಲ್ಲಿ ತಲ್ಲೀನರಾಗಿದ್ದಾರೆ. ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ್ದ ರಾಹುಲ್ ಗಾಂಧಿ ಅವರನ್ನು ಕೋರ್ಟ್ ಮೆಟ್ಟಿಲು ಹತ್ತಿಸಿದ್ದಕ್ಕಾಗಿ ದ್ವೇಷ ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಮಾನಸಿಕ ಅಸ್ವಸ್ಥೆ ನೀಡಿದ್ದ ದೂರನ್ನು ಆಧರಿಸಿ ರೈತ ನಾಯಕ ಮಾನ್ಯ ಯಡಿಯೂರಪ್ಪನವರನ್ನು ಬಂಧಿಸಲು ಹವಣಿಸುತ್ತಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ತಲೆದಂಡ ಹಾಗೂ ಸ್ವತಃ ಸರ್ಕಾರದ ಮೇಲೆ ಆರೋಪ ಬಂದಿರುವ ಬೆನ್ನಲ್ಲೇ ಭ್ರಷ್ಟಾಚಾರ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಯಡಿಯೂರಪ್ಪನವರ ಮೇಲೆ ಅಪಪ್ರಚಾರದ ಷಡ್ಯಂತರ ರೂಪಿಸಿದ್ದಾರೆ. ಈ ಹಿಂದೆ ಸ್ವತಃ ಗೃಹ ಸಚಿವ ಜಿ. ಪರಮೇಶ್ವರ್ ಅವರೇ ಮಾನಸಿಕ ಅಸ್ವಸ್ಥೆ ದುರುದ್ದೇಶಪೂರಿತವಾಗಿ ದೂರು ನೀಡಿದ್ದಾಳೆಂದು ಹೇಳಿಕೆ ನೀಡಿ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಜಗಜ್ಜಾಹೀರಾಗಿತ್ತು. 3 ತಿಂಗಳ ನಂತರ ಈ ಪ್ರಕರಣಕ್ಕೆ ಮರುಜೀವ ತುಂಬಲು ಹೊರಟಿರುವುದು ವಿಪರ್ಯಾಸ. ಮಾನಸಿಕ ಅಸ್ವಸ್ಥೆ ಸ್ವತಃ ತನ್ನ ಮಕ್ಕಳು ಹಾಗೂ ಗಂಡನ ವಿರುದ್ಧವೇ ದೂರು ನೀಡಿರುವುದೂ ಸೇರಿದಂತೆ 53 ಜನರ ವಿರುದ್ಧದ ದೂರುಗಳಲ್ಲಿ ಯಡಿಯೂರಪ್ಪನವರ ಪ್ರಕರಣಕ್ಕೇ ಸರ್ಕಾರ ವಿಶೇಷ ಒತ್ತು ನೀಡಿದ್ದು ಏಕೆ? ಪ್ರಕರಣ ದಾಖಲಾಗಿ 3 ತಿಂಗಳಾದ ಮೇಲೆ ದಿಢೀರ್ ಬಂಧನ ಮಾಡುವ ಸಂಚು ರೂಪಿಸಿದ್ದು ಏಕೆ? ಕಾಂಗ್ರೆಸ್ಸಿನ ದೆಹಲಿ ನಾಯಕರ ನೀಚ ದ್ವೇಷ ರಾಜಕಾರಣಕ್ಕೆ ಕಟ್ಟುಬಿದ್ದು ಯಡಿಯೂರಪ್ಪನವರನ್ನು ಕೆಣಕಲು ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಟೀಕಿಸಿದೆ.
Post a comment
Log in to write reviews