ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆಯಾ ? ಖಾತೆ ತೆರೆಯುತ್ತಿರುವ ಮಹಿಳೆಯರು ಬೆಂಗಳೂರು
ಖಾತೆ ತೆರೆಯಲು ಅವಕಾಶವಿಲ್ಲದಿದ್ದರೂ ಕಾಂಗ್ರೆಸ್ ಹಣ ಬರುತ್ತದೆ ಎಂದು ಕಳೆದ ನಾಲ್ಕೈದು ದಿನದಿಂದ ಕೇಂದ್ರ ಅಂಚೆ ಇಲಾಖೆಗೆ ಮಹಿಳೆಯರು ಮುಗಿಬೀಳುತ್ತಿದ್ದಾರೆ. ಕಾರಣ ಮಾತ್ರ ವಿಚಿತ್ರವಾಗಿದೆ.
ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ ಮುಂದೆ ಈಗ ಮಹಿಳೆಯರ ಸಾಲು ಮಾಮೂಲಿಯಾಗಿದೆ. ಅದರಲ್ಲೂ ಹೆಚ್ಚಿನವರು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮಹಿಳೆಯರು. ತಮ್ಮ ಮಕ್ಕಳು, ಕೆಲಸ ಎಲ್ಲವನ್ನು ಬಿಟ್ಟು ಈ ರೀತಿ ಬೆಳಿಗ್ಗೆಯಿಂದ ಸಂಜೆಯವರೆಗೆ ಕ್ಯೂ ನಿಂತು ಖಾತೆ ಮಾಡಿಕೊಡಿ ಎಂದು ಅಂಚೆ ಇಲಾಖೆಗೆ ದಂಬಾಲು ಬಿದ್ದಿದ್ದಾರೆ.
ಬೆಂಗಳೂರು ಮುಖ್ಯ ಅಂಚೆ ಕಚೇರಿಯಲ್ಲಿ ನಿತ್ಯ ಸಾವಿರಾರು ಮಹಿಳೆಯರು ಸರತಿ ಸಾಲಿನಲ್ಲಿ ಬಂದು ನಿಲ್ಲುತ್ತಿದ್ದಾರೆ. ಕಾಂಗ್ರೆಸ್ ನೇತ್ರತ್ವದ INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 8500ರೂ ಹಣ ಹಾಕುತ್ತಾರೆ ಎಂಬ ವದಂತಿ ಹಾಗೂ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಈ ಮಹಿಳೆಯರ ವಾದವಾಗಿದೆ.
ಈ ಹಿನ್ನಲೆಯಲ್ಲಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು ಮಹಿಳೆಯರು ಮುಂದಾಗಿದ್ದಾರೆ. ಪ್ರತಿ ನಿತ್ಯ ಸಾವಿರಾರು ಜನ ಮಹಿಳೆಯರು ಖಾತೆ ತೆರೆಯಲು ಅಂಚೆ ಕಚೇರಿಯತ್ತ ಮುಖ ಮಾಡುತ್ತಿದ್ದಾರೆ. ಬೆಳಿಗ್ಗೆ 5ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಕಾಯುತ್ತಾ ಇದ್ದಾರೆ. ಈ ರೀತಿಯ ಖಾತೆ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದರೂ, ಖಾತೆ ತೆರೆಯುವವರ ಸಂಖ್ಯೆ ಅಧಿಕವಾದ ನಿಟ್ಟಿನಲ್ಲಿ ಒತ್ತಡ ನಿವಾರಣೆಗಾಗಿ ಅಂಚೆ ಇಲಾಖೆ ಟೋಕನ್ ವಿತರಣೆ ಮಾಡುತ್ತಿದೆ.
ಈ ಕುರಿತು ಮಾತನಾಡಿದ ಮುಖ್ಯ ಅಂಚೆ ಪಾಲಕ ಮಂಜೇಶ್ ಇದು ಇಂಡಿಯಾ ಪೋಸ್ಟ್ ಪೇಮೆಂಟ್ ಖಾತೆ. ಈ ಖಾತೆ ಮೂಲಕ ಡಿಬಿಟಿಯ ಹಣವನ್ನು ಪಡೆಯಬಹುದು. ಖಾತೆ ತೆರೆದರೆ 8 ಸಾವಿರ ಹಣ ಹಾಕುತ್ತಾರೆ ಎನ್ನುವ ತಪ್ಪುಮಾಹಿತಿಯಿಂದಾಗಿ ಜನ ಹೆಚ್ಚಾಗಿ ಬರುತ್ತಿದ್ದಾರೆ. ನಾವು ಅವರಿಗೆ ತಿಳುವಳಿಕೆ ನೀಡಲು ಬ್ಯಾನರ್ ಅಳವಡಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಹಣವನ್ನ ಕೇವಲ ಖಾತೆಯ ತೆರೆಯುವುದರಿಂದ ಹಾಕುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಹೀಗಿದ್ದರೂ ಗಾಳಿಮಾತಿನಂತೆ ಬಹುತೇಕ ಮಹಿಳೆಯರು ಬಂದು ipp ಖಾತೆ ತೆರೆಯುತ್ತಿದ್ದಾರೆ. IPP ಖಾತೆ ತೆರೆಯಲು ಯಾವುದೇ ಕೊನೆಯ ದಿನಾಂಕ ಇಲ್ಲ. ಯಾವುದೇ ಪೋಸ್ಟ್ ಆಫೀಸ್ನಲ್ಲಿಯೂ ಈ ಸೇವಾ ಖಾತೆಯನ್ನ ತೆರೆಯಬಹುದು. ಈ ರೀತಿಯ ಖಾತೆ ತೆರೆಯಲು ಯಾವುದೇ ಶುಲ್ಕ ಇಲ್ಲ . 200ರೂಪಾಯಿ ಸ್ವೀಕರಿಸುತ್ತೇವೆ ಅದು ಅವರ ಖಾತೆಗೆ ಜಮೆಯಾಗುತ್ತದೆ. ಹೆಚ್ಚಿನ ಜನ ಖಾತೆ ತೆರೆಯಲು ಬರುತ್ತಿರುವ ಕಾರಣ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿದ್ದೇವೆ. ಪ್ರತಿ ನಿತ್ಯ ಒಂದು ಸಾವಿರಕ್ಕೂ ಹೆಚ್ಚಿನ ಖಾತೆ ತೆರೆಯಲಾಗುತ್ತಿದೆ ಎಂದು ತಿಳಿಸಿದರು.
ಆದರೆ, ಕೆಲ ಮಹಿಳೆಯರ ವಾದವೇ ಬೇರೆ. ಈ ರೀತಿ ಖಾತೆ ತೆರೆಯಲು ನಮ್ಮ ಮನೆಯವರೇ ತಿಳಿಸಿದ್ದಾರೆ. ಹೀಗಾಗಿ ಖಾತೆ ತೆರೆಯುತ್ತಿದ್ದೇವೆ ಎಂದು ಬಹುತೇಕ ಮಹಿಳೆಯರು ತಿಳಿಸಿದರು. ಅಲ್ಲದೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಅವರು ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಖಾತೆಗೆ ಪ್ರತಿ ತಿಂಗಳು 8500 ರೂ. ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಚುನಾವಣೆ ಫಲಿತಾಂಶ ಪ್ರಕಟಕ್ಕೆ ಐದು ದಿನವಿರುವುವಾಗಲೇ ಅಂಚೆ ಕಚೇರಿ ಮುಂದೆ ಜನಜಂಗುಳಿ ಮಾತ್ರ ಕರಗುತ್ತಿಲ್ಲ.
Post a comment
Log in to write reviews