ಹುಬ್ಬಳ್ಳಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದು ಈ ಬಾರಿ ಗೆಲ್ಲುತ್ತೇನೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮತದಾರರು ನನ್ನ ಪರವಾಗಿದ್ದಾರೆ. ಹಾಗಾಗಿ ಹೆಚ್ಚಿನ ಮತಗಳಿಂದ ಗೆಲುವು ಲಭಿಸಲಿದೆ ಎಂದರು.
ಸಚಿವ ನಾಗೇಂದ್ರ ಬಂಧಿಸಿ, ಸಿಬಿಐ ತನಿಖೆಗೆ ವಹಿಸಿ
ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ಸಂಬಂಧ ಸಚಿವ ನಾಗೇಂದ್ರರನ್ನು ಬಂಧಿಸಬೇಕು ಹಾಗೂ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.
ಇದೊಂದು ದೊಡ್ಡ ಭ್ರಷ್ಟಾಚಾರ ಹಗರಣ. ಇದರ ತನಿಖೆ ಸಿಬಿಐಗೆ ವಹಿಸಬೇಕು. ಸಚಿವ ನಾಗೇಂದ್ರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಇದರಲ್ಲಿ ಸಿಎಂ ಸೇರಿದಂತೆ ಸಂಬಂಧಿಸಿದ ಎಲ್ಲರ ಮೇಲೂ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ತೀರಾ ನಿರ್ಲಜ್ಜೆಯ ಸರ್ಕಾರವಾಗಿದೆ. ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 100 ಕೋಟಿ ರು. ಭ್ರಷ್ಟಾಚಾರ ಹಗರಣ ಬಯಲಿಗೆ ಬಂದರೂ ಇದುವರೆಗೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿಲ್ಲ. ಯಾವ ಕಾರಣಕ್ಕಾಗಿ ನಿಗಮದ ಹಣ ಮತ್ತೊಂದು ಖಾತೆಗೆ ವರ್ಗಾಯಿಸಿದರು ಎಂಬುದಕ್ಕೆ ಸರ್ಕಾರ ಇನ್ನೂ ಉತ್ತರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಪಾರದರ್ಶಕ ತನಿಖೆ ನಡೆಯುವುದು ಅನುಮಾನ. ಅಲ್ಲದೆ ಯೂನಿಯನ್ ಬ್ಯಾಂಕ್ ಕೆಲ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರುವುದರಿಂದ ರಾಜ್ಯ ಸರ್ಕಾರ ಈ ಪ್ರಕರಣ ಸಿಬಿಐಗೇ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರಜ್ವಲ್ ರೇವಣ್ಣ ಕ್ಷಮೆಗೆ ಅರ್ಹರಲ್ಲ
ಪ್ರಜ್ವಲ್ ರೇವಣ್ಣ ಕ್ಷಮೆಗೆ ಅರ್ಹರಲ್ಲ. ಪೆನ್ ಡ್ರೈವ್ ಪ್ರಕರಣದಲ್ಲಿ ಕಟ್ಟುನಿಟ್ಟಿನ ತನಿಖೆ ನಡೆಸಿ ಅತ್ಯುಗ್ರ ಶಿಕ್ಷೆ ವಿಧಿಸಬೇಕು ಎಂದರು.
ಪ್ರಜ್ವಲ್ ರೇವಣ್ಣ ಯಾವ ಕಾರಣಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ. ಆದರೂ, ಕ್ಷಮೆಗೆ ಅರ್ಹರಲ್ಲ. ಮಹಿಳೆಯರನ್ನು ಉನ್ನತ ಸ್ಥಾನದಲ್ಲಿರಿಸಿ, ಅತ್ಯಂತ ಗೌರವದಿಂದ ನೋಡುವ ದೇಶದಲ್ಲಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಹೇಸಿಗೆ ತರಿಸುವ ಕೆಲಸ. ದೇಶದ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ. ತ್ವರಿತವಾಗಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಆರೋಪಿಗೆ ಶೀಘ್ರವೇ ಅತ್ಯುಗ್ರ ಶಿಕ್ಷೆ ವಿಧಿಸಬೇಕು ಎಂದರು.
Post a comment
Log in to write reviews