ಬೆಂಗಳೂರು: ರಾಜ್ಯದಲ್ಲಿ ಹಲವು ಕಡೆ ಮುಂಗಾರು ಮಳೆ ದುರ್ಬಲಗೊಳ್ಳುತ್ತಿದ್ದು ಮಲೆನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಶನಿವಾರದಿಂದ ಮಳೆ ಕ್ಷೀಣವಾಗಲಿದೆ. ಆದರೆ ರಾಜ್ಯದ ಆರು ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರಿನಲ್ಲಿ ಮುಂದಿನ 24 ಗಂಟೆ ಗುಡುಗುಸಹಿತ ಸಾಧಾರಣ ಮಳೆಯಾಗಲಿದೆ. ಮೂರ್ನಾಲ್ಕು ದಿನಗಳಿಂದ ದಕ್ಷಿಣ ಒಳನಾಡಿನ ಮಲೆನಾಡು ಜಿಲ್ಲೆಗಳಲ್ಲಿ ಸುರಿಯುತ್ತಿದ್ದ ಮಳೆ ಇಳಿಮುಖವಾಗಲಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಒಳನಾಡಿನ ಬೀದರ್, ಉಡುಪಿ, ಉತ್ತರ ಕನ್ನಡ ಮತ್ತು ಕಲಬುರಗಿ, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯಲ್ಲೋ ಅಲರ್ಟ್ ನೀಡಲಾಗಿದೆ. ಸೆಪ್ಟಂಬರ್ 28ರಿಂದ ಕರಾವಳಿ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕ್ಷೀಣವಾಗಲಿದೆ ಎಂದು ಇಲಾಖೆ ಹೇಳಿದೆ.
ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿಗ್ರಿ ಮತ್ತು 21 ಡಿಗ್ರಿ ಇರಲಿದೆ.
ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದಾವಣಗೆರೆ ಜಿಲ್ಲೆ, ಕಲಬುರಗಿ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ.
ರಾಜ್ಯದಲ್ಲಿ ಪುಸಕ್ತ ಸಾಲಿನ ಮುಂಗಾರು ಸೆಪ್ಟಂಬರ್ 30ರಂದು ಕೊನೆಗೊಳ್ಳಲಿದ್ದು, ಹಿಂಗಾರು ಮಳೆ ಅಕ್ಟೋಬರ್ 1ರಿಂದ ಶುರುವಾಗಲಿದ್ದು, ರಾಜ್ಯದಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ಉತ್ತಮ ಮಳೆಯಾಗಿದ್ದು, ಸೆಪ್ಟಂಬರ್ 1ರಿಂದ 26ರವರೆಗೆ ಶೇ.16ರಷ್ಟು ಮಳೆಯಾಗಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಶೇ.90ರಷ್ಟು ಮಳೆ ಕುಂಠಿತವಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಪುವಿಯರಸನ್ ತಿಳಿಸಿದ್ದಾರೆ.
Post a comment
Log in to write reviews