ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಅದು ಸಹ ಒಂದೇ ಓವರ್ನಲ್ಲಿ 39 ರನ್ ಬಾರಿಸುವ ಮೂಲಕ ಸೃಷ್ಟಿಯಾಗಿದೆ ಅನ್ನುವುದೇ ವಿಶೇಷ. ಇಂತಹದೊಂದು ವಿಶೇಷ ದಾಖಲೆ ಬರೆದಿರುವುದು ಸಮೋಅ ತಂಡದ ಸ್ಪೋಟಕ ದಾಂಡಿಗ ಡೇರಿಯಸ್ ವಿಸ್ಸರ್. ಈ ದಾಖಲೆಯೊಂದಿಗೆ ಡೇರಿಯಸ್ ಯುವರಾಜ್ ಸಿಂಗ್ ಅವರ ರೆಕಾರ್ಡ್ ಮುರಿದಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಈಸ್ಟ್ ಏಷ್ಯಾ-ಪೆಸಿಫಿಕ್ ಕ್ವಾಲಿಫೈಯರ್ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 39 ರನ್ ಚಚ್ಚುವ ಮೂಲಕ ಸಮೋಅ ತಂಡದ ಆಟಗಾರ ಡೇರಿಯಸ್ ವಿಸ್ಸರ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ದಾಖಲೆಗಳ ಸರದಾರ ಯುವರಾಜ್ ಸಿಂಗ್ ಅವರ ವರ್ಲ್ಡ್ ರೆಕಾರ್ಡ್ ಅನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಅಪಿಯಾದ ಗಾರ್ಡನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸಮೋಅ ಹಾಗೂ ವನವಾಟು ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಮೋಅ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸಮೋಅ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 10 ರನ್ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಕಣಕ್ಕಿಳಿದ ಡೇರಿಯಸ್ ವಿಸ್ಸರ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡೇರಿಯಸ್, ವನವಾಟು ಬೌಲರ್ಗಳ ಬೆಂಡೆತ್ತಿದರು. ಅದರಲ್ಲೂ ನಲಿನ್ ನಿಪಿಕೊ ಎಸೆದ 15ನೇ ಓವರ್ನಲ್ಲಿ 39 ರನ್ ಚಚ್ಚುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.
ಈ ಓವರ್ನ ಮೊದಲ ಮೂರು ಎಸೆತಗಳಲ್ಲಿ ಡೇರಿಯಸ್ ವಿಸ್ಸರ್ ಸಿಕ್ಸರ್ ಸಿಡಿಸಿದರು. 4ನೇ ಎಸೆತ ನೋಬಾಲ್, ಭರ್ಜರಿ ಸಿಕ್ಸ್. ಮರು ಎಸೆತದಲ್ಲಿ ಮತ್ತೊಂದು ಸಿಕ್ಸ್. 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 6ನೇ ಎಸೆತ ನೋ ಬಾಲ್, ಮತ್ತೊಂದು ಸಿಕ್ಸ್. ಮರು ಎಸೆತ ನೋ ಬಾಲ್. ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್. ಈ ಮೂಲಕ ಡೇರಿಯಸ್ ವಿಸ್ಸರ್ ಒಟ್ಟು 39 ರನ್ ಕಲೆಹಾಕಿದ್ದಾರೆ.
ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಡೇರಿಯಸ್ ವಿಸ್ಸರ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿತ್ತು. 2007ರ ಟಿ20 ವಿಶ್ವಕಪ್ನಲ್ಲಿ ಯುವಿ ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ 6 ಸಿಕ್ಸ್ ಬಾರಿಸಿ 36 ರನ್ ಗಳಿಸಿದ್ದರು. ಇದೀಗ 39 ರನ್ಗಳೊಂದಿಗೆ ಡೇರಿಯಸ್ ವಿಸ್ಸರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ
Post a comment
Log in to write reviews