ಬೆಂಗಳೂರು: ರಾಜ್ಯಾದ್ಯಂತ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಉಡುಪಿ, ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ 5 ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 7 ದಿನಗಳಲ್ಲಿ ಕರಾವಳಿಯ ಬಹುತೇಕ ಭಾಗದಲ್ಲಿ ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಸಾಧಾರಣದಿಂದ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕ ಸೇರಿದಂತೆ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಈ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಮುಂದಿನ ಎರಡು-ಮೂರು ದಿನಗಳಲ್ಲಿ ಕೇಂದ್ರ ಅರಬ್ಬೀ ಸಮುದ್ರ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕರಾವಳಿ, ಛತ್ತೀಸ್‌ಗಢ, ದಕ್ಷಿಣ ಒಡಿಶಾ ಮತ್ತು ಬಂಗಾಳಕೊಲ್ಲಿಯಲ್ಲಿ ನೈಋತ್ಯ ಮುಂಗಾರು ತೀವ್ರಗೊಳ್ಳಲಿದೆ.
ಮೇ ತಿಂಗಳ ನಂತರ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಬರದಿಂದ ಕಂಗೆಟ್ಟಿದ್ದ ರೈತ ಸಮುದಾಯಕ್ಕೆ ಖುಷಿ ತಂದಂತಾಗಿದೆ. ಜೊತೆಗೆ ಪ್ರಮುಖ ಜಲಾಶಯಗಳ ಒಳ ಹರಿವು ಪ್ರಾರಂಭವಾಗಿರುವುದು ಮತ್ತಷ್ಟು ಸಂತೋಷವನ್ನು ನೀಡುತ್ತಿದೆ.
ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಳ
ರಾಜ್ಯದ 14 ಪ್ರಮುಖ ಜಲಾಶಯಗಳ ಪೈಕಿ ಮಲಪ್ರಭಾ ಜಲಾಶಯವನ್ನು ಹೊರತುಪಡಿಸಿ ಉಳಿದೆಲ್ಲಾ ಜಲಾಶಯಗಳ ಒಳಹರಿವು ಪ್ರಾರಂಭವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಒಳಹರಿವು ಬಾರದಿದ್ದರೂ ಸ್ವಲ್ಪ ಪ್ರಮಾಣದ ಒಳಹರಿವು ಎಲ್ಲಾ ಜಲಾಶಯಗಳಲ್ಲಿ ಕಂಡುಬರುತ್ತಿದೆ. ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆಯ ತೀವ್ರ ಕೊರತೆಯಿಂದ ರಾಜ್ಯ ಬರದ ಕರಾಳ ಛಾಯೆಗೆ ಸಿಲುಕಿತ್ತು. ಕಳೆದ ಬೇಸಿಗೆಯಲ್ಲಿ ಅಕ್ಷರಶಃ ಬಿಸಿಲ ನಾಡಾಗಿ ಪರಿಣಮಿಸಿತ್ತು.
ಈಗಾಗಲೇ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ನಿರಂತರವಾಗಿ ಬೀಳುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿವೆ. ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ 174.32 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 192.75 ಟಿಎಂಸಿ ಅಡಿಯಷ್ಟು ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 18 ಟಿಎಂಸಿಯಷ್ಟು ನೀರು ಕಡಿಮೆ ಸಂಗ್ರಹವಾಗಿದೆ.
ಕೃಷ್ಣಾಕೊಳ್ಳದ ತುಂಗಭದ್ರಾ ಜಲಾಶಯಕ್ಕೆ 1,400 ಕ್ಕೂ ಹೆಚ್ಚು ಕ್ಯೂಸೆಕ್, ಆಲಮಟ್ಟಿಗೆ 2,500 ಕ್ಕೂ ಹೆಚ್ಚು ಕ್ಯೂಸೆಕ್ , ನಾರಾಯಣಪುರ ಜಲಾಶಯಕ್ಕೆ 12,000 ಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಇದೆ. ಒಟ್ಟಾರೆ ಕಾವೇರಿ ಜಲಾನಯನದ ಜಲಾಶಯಗಳಲ್ಲಿ 15,000 ಕ್ಯೂಸೆಕ್ ಗಿಂತಲೂ ಹೆಚ್ಚಿನ ಒಳಹರಿವಿದೆ.
ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪ, ವರಾಹಿ ಜಲಾಶಯಗಳಿಗೆ 1,500 ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬರುತ್ತಿದೆ. ಕಾವೇರಿ ಕೊಳ್ಳದ ಹಾರಂಗಿ, ಹೇಮಾವತಿ ಜಲಾಶಯಕ್ಕೆ ಅಲ್ಪಪ್ರಮಾಣದ ಒಳಹರಿವಿದೆ. ಕೆಆರ್‌ಎಸ್ ಜಲಾಶಯಕ್ಕೆ 1,400 ಕ್ಯೂಸೆಕ್ ಗೂ ಹೆಚ್ಚು ಒಳಹರಿವಿದ್ದರೆ ಕಬಿನಿ ಜಲಾಶಯಕ್ಕೆ 3,000 ಕ್ಕೂ ಹೆಚ್ಚು ಕ್ಯೂಸೆಕ್ಸ್ ಒಳಹರಿವಿದೆ.
ಈ ನಾಲ್ಕೂ ಜಲಾಶಯಗಳಲ್ಲಿ 34 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಕಳೆದ ವರ್ಷ 33.50 ಅಡಿ ಟಿಎಂಸಿಯಷ್ಟು ನೀರಿತ್ತು. ಈ ಬಾರಿಯ ಮುಂಗಾರು ವಾಡಿಕೆ ಪ್ರಮಾಣದಲ್ಲಿ ಆಗಲಿದೆ ಎಂಬ ಮುನ್ಸೂಚನೆಯಿದೆ. ಅಲ್ಲದೆ, ಸದ್ಯಕ್ಕೆ ಇನ್ನೂ ಒಂದು ವಾರ ಮಳೆ ಬೀಳುವ ಮುನ್ಸೂಚನೆಗಳಿವೆ. ಹೀಗಾಗಿ ಒಳಹರಿವು ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ.
ಆದರೆ ಕೇರಳದ ವಯನಾಡು ಭಾಗದಲ್ಲಿ ಮುಂಗಾರು ಅವಧಿಗೂ ಮುನ್ನ ಆರಂಭವಾಗಿದ್ದರೂ ಈ ತನಕ ಭಾರಿ ಮಳೆಯಾಗಿಲ್ಲ. ವಯನಾಡು ಮತ್ತು ಕೊಡಗಿನ ಭಾಗದಲ್ಲಿ ಮುಂಗಾರು ಆರಂಭವಾಗಿ ಎಂಟು-ಹತ್ತು ದಿನ ಕಳೆದರೂ ಭಾರಿ ಮಳೆಯಾಗುತ್ತಿಲ್ಲ. ಆದರೆ ನಿರಂತರ ಮಳೆಯಾಗುತ್ತಿದೆ. ಇದರಿಂದ ಜಲಾಶಯದ ಒಳಹರಿವು ಹೆಚ್ಚಾಗುವ ನಿರೀಕ್ಷೆ ಇದೆ.
Post a comment
Log in to write reviews