ತೂಕ ಇಳಿಕೆಗೆ ಅನೇಕರು ನಾನಾ ರೀತಿ ಕಸರತ್ತುಗಳನ್ನು ಮಾಡುತ್ತಾರೆ. ಯೋಗಾಸನ ಮಾಡುವುದರಿಂದಲೂ ತೂಕ ನಿರ್ವಹಣೆ ಮಾಡಬಹುದು. ಇದು ದೇಹವನ್ನು ಫಿಟ್ ಆಗಿರಿಸುವಲ್ಲಿ ಸಹಾಯಕವಾಗಿದೆ. ತೂಕ ಇಳಿಕೆಗೆ ಪರಿಣಾಮಕಾರಿಯಾದ ಯೋಗಾಸನಗಳು ಇಲ್ಲಿವೆ.
ದೇಹದ ಫಿಟ್ನೆಸ್ ಕಾಪಾಡಲು ಬಯಸುವವರು ಯೋಗಾಸನವನ್ನು ಅಭ್ಯಾಸ ಮಾಡಬಹುದು. ಕ್ಯಾಲೋರಿಗಳನ್ನು ಬರ್ನ್ ಮಾಡಲು ಹಾಗೂ ಆರೋಗ್ಯಕರ ತೂಕ ಕಾಪಾಡಲು ಯೋಗಾಸನ ದಿವ್ಯಔಷದ ಎಂದರೆ ತಪ್ಪಿಲ್ಲ. ಇಂದು ಬಹುತೇಕ ಮಂದಿ ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಹೆಚ್ಚಾದ ಬಳಿಕ ತೂಕ ಇಳಿಕೆಯತ್ತ ಚಿಂತಿಸುತ್ತಾರೆ. ಇದಕ್ಕಾಗಿ ಡಯೆಟ್ ಮಾಡುವುದು, ಜಿಮ್‍ನಲ್ಲಿ ಬೆವರಿಳುವುದು ಇತ್ಯಾದಿಗಳನ್ನು ಮಾಡುತ್ತಾರೆ. ಯೋಗಾಸನ ಮಾಡುವುದರಿಂದಲೂ ತೂಕ ನಿರ್ವಹಣೆ ಮಾಡಬಹುದು. ಇದು ದೇಹವನ್ನು ಫಿಟ್ ಆಗಿರಿಸುವಲ್ಲಿ ಸಹಾಯಕವಾಗಿದೆ. ತೂಕ ಇಳಿಕೆಗೆ ಪರಿಣಾಮಕಾರಿಯಾದ ಯೋಗಾಸನಗಳು ಇಲ್ಲಿವೆ.
ತೂಕ ಇಳಿಕೆಗೆ ಪರಿಣಾಮಕಾರಿಯಾದ ಯೋಗಾಸನಗಳು
ಸೂರ್ಯ ನಮಸ್ಕಾರ: ಇದು ಹನ್ನೆರಡು ಯೋಗ ಭಂಗಿಗಳ ಕ್ರಿಯಾತ್ಮಕ ಅನುಕ್ರಮವಾಗಿದ್ದು, ವಿಶೇಷವಾಗಿ ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ. ವಿವಿಧ ಸ್ನಾಯು ಗುಂಪುಗಳನ್ನು ವಿಸ್ತರಿಸಲು, ಬಲಪಡಿಸಲು ಇದು ಸಹಾಯ ಮಾಡುತ್ತದೆ. ಹಾಗೆಯೇ ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಚಯಾಪಚಯ ಕ್ರಿಯೆ ಉತ್ತಮಗೊಳ್ಳಲು ಕೂಡ ಸಹಕಾರಿ.
ಚತುರಂಗ ದಂಡಾಸನ: ಇದೊಂದು ಶಕ್ತಿಯುತ ಆಸನವಾಗಿದ್ದು, ಇಡೀ ದೇಹವನ್ನು ವಿಶೇಷವಾಗಿ ಸ್ನಾಯುಗಳು, ತೋಳುಗಳು ಮತ್ತು ಕಾಲುಗಳನ್ನು ತೊಡಗಿಸಿಕೊಳ್ಳುತ್ತವೆ. ಇವುಗಳ ಬಲವರ್ಧನೆಗೆ ಚತುರಂಗ ದಂಡಾಸನವನ್ನು ಅಭ್ಯಾಸ ಮಾಡುವುದರಿಂದ ಪ್ರಯೋಜನವನ್ನು ಪಡೆಯಬಹುದು. ಈ ಭಂಗಿಯನ್ನು ಮಾಡುವಾಗ ಕೈಗಳು ಮತ್ತು ಕಾಲುಗಳನ್ನು ನೆಲದ ಮೇಲೆ ನೇರವಾಗಿ ಇಡಬೇಕು. ಪುಶ್‍ಅಪ್‍ನಂತೆಯೇ ಇರುವ ಭಂಗಿ ಇದಾಗಿದ್ದು, ಮೊದಲಿಗೆ ಮಾಡುವಾಗ ಕಷ್ಟ ಎನಿಸಬಹುದು. ಅಭ್ಯಾಸ ಮಾಡುತ್ತಾ ಸುಲಭವಾಗುತ್ತದೆ.
ವೀರಭದ್ರಾಸನ: ವೀರರಂತೆ ಶಕ್ತಿ ಮತ್ತು ಧೈರ್ಯವನ್ನು ನೀಡುವ ಆಸನವಿದು. ಕೈಗಳು, ಭುಜ ಹಾಗೂ ಬೆನ್ನಿನ ಸ್ನಾಯುಗಳನ್ನು ಇದು ಬಲಪಡಿಸುತ್ತದೆ. ದೇಹದ ಸಮತೋಲನ ಸುಧಾರಿಸಲು ಸಹಕಾರಿ. ಹಾಗೆಯೇ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಆದರೆ, ಬೆನ್ನಿನ ಸಮಸ್ಯೆ, ಅಧಿಕ ರಕ್ತದೊತ್ತಡ, ದೀರ್ಘಾವಧಿಯ ಅನಾರೋಗ್ಯ, ಅತಿಸಾರದಂತಹ ಸಮಸ್ಯೆಗಳನ್ನು ಹೊಂದಿದ್ದರೆ ಈ ಆಸನವನ್ನು ಪ್ರಯತ್ನಿಸುವುದು ಉತ್ತಮವಲ್ಲ.
ಭುಜಂಗಾಸನ: ಭುಜಂಗ ಎಂದರೆ ಸರ್ಪ (ನಾಗರ) ಎಂದರ್ಥ. ಈ ಆಸನದಲ್ಲಿ ಹೆಡೆ ಎತ್ತಿದ ನಾಗರಹಾವಿನ ಆಕಾರವನ್ನು ಶರೀರವು ಹೋಲುವುದರಿಂದ ಈ ಹೆಸರು ಇಡಲಾಗಿದೆ. ಬೊಜ್ಜು ಕರಗಿಸಲು ಈ ಆಸನ ಅತ್ಯುತ್ತಮ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸುವಲ್ಲಿಯೂ ಪರಿಣಾಮಕಾರಿಯಾಗಿದೆ.
ಅಧೋ ಮುಖ ಶ್ವಾನಾಸನ: ಹೆಸರೇ ಹೇಳುವಂತೆ ಶ್ವಾನಾಸನ ಅಂದ್ರೆ ನಾಯಿ ಭಂಗಿ. ಶ್ವಾನ ಬಗ್ಗಿದಾಗ ಯಾವ ರೀತಿ ಕಾಣುತ್ತಾ ಅದೇ ರೀತಿ ಈ ಆಸನವನ್ನು ಮಾಡಬೇಕು. ಈ ಆಸನವನ್ನು ಮಾಡುವುದರಿಂದ ದೇಹವನ್ನು ಬಲಪಡಿಸುವುದು ಮಾತ್ರವಲ್ಲದೆ ಉತ್ತಮ ರಕ್ತಪರಿಚಲನೆ ಹಾಗೂ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಹೊಟ್ಟೆಯ ಸ್ನಾಯು ಬಲಗೊಳ್ಳಲು ಮತ್ತು ಬೆನ್ನು ಮೂಳೆಗೆ ಬೆಂಬಲ ಸಿಗಲು ಸಹಾಯಕವಾಗಿದೆ.
ನವಾಸನ (ದೋಣಿ ಭಂಗಿ): ಈ ಆಸನವನ್ನು ಪ್ರಯತ್ನಿಸುವುದು ತುಸು ಕಷ್ಟ. ದೋಣಿಯಂತೆ ಭಂಗಿಯನ್ನು ಮಾಡಬೇಕಿರುವುದರಿಂದ ಹಗ್ಗದ ಸಹಾಯದಿಂದ ಈ ಆಸನವನ್ನು ಪ್ರಯತ್ನಿಸಬಹುದು. ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಕಾಲುಗಳು ಮತ್ತು ಬೆನ್ನು ನೇರವಾಗುವುದು. ಮಧುಮೇಹ, ಅಜೀರ್ಣ, ಗ್ಯಾಸ್ಟ್ರಿಕ್, ಮಲಬದ್ಧತೆಗೆ ಈ ಆಸನ ಉತ್ತಮವಾಗಿದೆ.
ಹಾಲಾಸನ (ನೇಗಿಲು ಭಂಗಿ): ಹೊಟ್ಟೆಯ ಬೊಜ್ಜು ಕರಗಿಸಲು ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಪ್ರಯೋಜನವನ್ನು ಪಡೆಯಬಹುದು. ಇದು ಚಯಾಪಚಯವನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ. ಉತ್ತಮ ಜೀರ್ಣಕ್ರಿಯೆ, ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ.
ಈ ಯೋಗಾಸನಗಳನ್ನು ಪ್ರಯತ್ನಿಸುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ತೂಕ ನಿರ್ವಹಣೆಗೆ ಸಹಕಾರಿಯಾಗಿದೆ. ಇವುಗಳ ಜೊತೆಗೆ ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾದುದು ಕೂಡ ಬಹಳ ಮುಖ್ಯ.
Post a comment
Log in to write reviews